SSS Reaching Out for the Reason...
SSS South Social StaGe |Reaching Out for the Reason...
Follow @South_Social
SSS
Visit blogadda.com to discover Indian blogs
by Akshay Prabhu
Genre : ____
Expand Expand

Yaana (Kannada Novel) Review - Manjunath Ajjampura

"ಅನೂಹ್ಯ ಆಯಾಮಗಳ ಅದ್ಭುತ ಯಾನ "

ಐವತ್ತು ದಾಟಿದವರು, ಅರವತ್ತು ದಾಟಿದವರು ಕಂಪ್ಯೂಟರ್ ಕಲಿಯಲಾರೆವು, ಮೊಬೈಲ್ ಫೋನಿನಲ್ಲಿರುವ ಹತ್ತಾರು ತಂತ್ರಾಂಶ-ಸಾಧನಗಳನ್ನು ಬಳಸಲಾರೆವು, ಅಷ್ಟೇಕೆ ಕಿರು-ಸಂದೇಶ SMSಗಳನ್ನೂ ಓದಲಾರೆವು ಎಂದು ಮುಲುಕುತ್ತಿರುವಾಗ, ಎಂಬತ್ತರ ಡಾ||ಎಸ್.ಎಲ್.ಭೈರಪ್ಪನವರು ಖಭೌತ ವಿಜ್ಞಾನದ ವಸ್ತುವಿನ ಅತಿಕ್ಲಿಷ್ಟ ಪರಿಕಲ್ಪನೆಯ 'ಯಾನ' ಕಾದಂಬರಿಯನ್ನು ಕನ್ನಡಿಗರ ಮುಂದಿಟ್ಟಿದ್ದಾರೆ. ಸಂಕೀರ್ಣವಾದ ಸೃಷ್ಟಿ-ಪ್ರಕ್ರಿಯೆಯನ್ನು ಜೀವಕೋಟಿಯು ತನ್ನ ವಿಕಾಸದ ಪಥದಲ್ಲಿ ನೂರಾರು ಕೋಟಿ ವರ್ಷಗಳಿಂದ ಉಳಿಸಿಕೊಂಡು ಬಂದಿದೆ, ಮುಂದುವರಿಸಿಕೊಂಡು ಬಂದಿದೆ. ಈ ಸುದೀರ್ಘ ಕಾಲಘಟ್ಟದಲ್ಲಿ ಅದು ಮಾನಸಿಕವಾದ - ದೈಹಿಕವಾದ, ಅಷ್ಟೇಕೆ ಸಾಮಾಜಿಕವಾದ ಬಹು-ಆಯಾಮಗಳ ವೈಚಿತ್ರ್ಯವೂ ಆಗಿಹೋಗಿದೆ. ಭೈರಪ್ಪನವರು ತಮ್ಮ ಬಹುತೇಕ ಕಾದಂಬರಿಗಳಲ್ಲಿ ಕಾಮವನ್ನು ಒರೆಹಚ್ಚಿದ್ದಾರೆ. ವಿಜ್ಞಾನ-ಧರ್ಮ, ಪರಂಪರೆ-ಆಧುನಿಕತೆ, ಇಸ್ಲಾಂ-ಹಿಂದೂ, ಕ್ರೈಸ್ತ-ಹಿಂದೂ, ಕಲೆ-ಸಂಗೀತ, ಕಾಮ-ಪ್ರೇಮ, ಜಾತಿವ್ಯವಸ್ಥೆ, ಪುನರ್ಜನ್ಮ, ಹೀಗೆ ಹಲವು ಸಂಘರ್ಷಗಳು ಅವರ ಕಾದಂಬರಿಗಳ ಕಥಾಹಂದರದಲ್ಲಿ ಮುಖಾಮುಖಿಯಾಗುತ್ತವೆ.

Yaana by S.L.Bhyrappa

ಆತ್ಮಸಾಕ್ಷಿ-ಅಂತಃಸಾಕ್ಷಿಗಳ ಸಂಘರ್ಷವು ಮನೋಪಥದಲ್ಲಿ, ಕನಸು-ನನಸುಗಳಲ್ಲಿ ಒಳಮುಖವಾಗಿ ತಡಕುತ್ತ ಹೋಗುತ್ತದೆ
ಸುದರ್ಶನ-ಇಂಗಾ, ಸುದರ್ಶನ-ಉತ್ತರೆ, ಯಾದವ-ಉತ್ತರೆ, ಮೇದಿನಿ-ಆಕಾಶ್, ಈ ಗಂಡು-ಹೆಣ್ಣುಗಳ ನಡುವಿನ ಸಂಬಂಧಗಳು ಎತ್ತುವ ಪ್ರಶ್ನೆಗಳು ಕೋಟಿಕೋಟಿ ಮೈಲಿಗಳ ದೀರ್ಘಯಾನದಲ್ಲಿ ಮಾನವಸಂಬಂಧಗಳ ಜಾಗತಿಕ-ಪರಂಪರೆಯನ್ನೇ ನಿಕಷಕ್ಕೆ ಒಡ್ಡುತ್ತವೆ. ‘ಜಲಪಾತ’ ಕೃತಿಯ ಡಾ|| ನಾಡಗೌಡರು, 'ವಂಶವೃಕ್ಷ'ದ ಶ್ರೋತ್ರಿಯರು-ನಾಣಿ, 'ಪರ್ವ'ದ ಕುಂತಿ-ದ್ರೌಪದಿಯರು, 'ಸಾರ್ಥ'-'ಆವರಣ'ಗಳ ನಾಯಕ-ನಾಯಕಿಯರು ಬೇರೆ ಬೇರೆ ರೂಪಗಳಲ್ಲಿ ಬೇರೆ ಬೇರೆ ಪಾತ್ರಗಳಾಗಿ ಉತ್ತರವಿಲ್ಲದ ಅದೇ ಪ್ರಶ್ನೆಗಳನ್ನು ಮತ್ತೆಮತ್ತೆ ಎತ್ತುತ್ತಿದ್ದಾರೆಯೋ, ಎಂಬ ಅನಿಸಿಕೆ ಓದುಗರ ಮನಸ್ಸಿನಲ್ಲಿ ಹಾದುಹೋಗಲೂಬಹುದು. ಆದರೆ, 'ಯಾನ' ಕಾದಂಬರಿಯು ಏಕಕಾಲದಲ್ಲಿ ಮೂರು ಮೂರು ದಿಕ್ಕುಗಳಲ್ಲಿ ಪಯಣಿಸುತ್ತದೆ. ಕಾಲ-ದೇಶಗಳನ್ನು ಮೀರಿದ ಅಂತರಿಕ್ಷದ ಯಾನ ಒಂದೆಡೆ ಅನಾವರಣಗೊಳ್ಳುತ್ತ ಹೋಗುತ್ತದೆ. ಆತ್ಮಸಾಕ್ಷಿ-ಅಂತಃಸಾಕ್ಷಿಗಳ ಸಂಘರ್ಷವು ಮನೋಪಥದಲ್ಲಿ, ಕನಸು-ನನಸುಗಳಲ್ಲಿ ಒಳಮುಖವಾಗಿ ತಡಕುತ್ತ ಹೋಗುತ್ತದೆ. ಇನ್ನೊಂದೆಡೆ ಅಧ್ಯಾತ್ಮದ ಹಾದಿಯಲ್ಲಿ ಸತ್ಯದ, ಪರಮಸತ್ಯದ ಹುಡುಕಾಟವು - ಅನ್ವೇಷಣೆಯು ಮನೋಭಿತ್ತಿಯನ್ನು ಆವರಿಸುತ್ತ ಹೋಗುತ್ತದೆ : ಸತ್ಯವೆಂದರೆ ಏನು? ಸಾರ್ವಕಾಲಿಕ - ಸಾರ್ವದೇಶಿಕ ಸತ್ಯವೆಂಬುದಿಲ್ಲ. ಕ್ರಿಯಾಕಾರಿತ್ವವೇ ಸತ್ಯದ ನಿಕಷ. ಆದ್ದರಿಂದ ಅಧ್ಯಾತ್ಮವು ಸತ್ಯದ ಅಂತಿಮ ಪರೀಕ್ಷೆಯನ್ನು ಹೊರಪ್ರಪಂಚದ ವಸ್ತುವಿನಿಂದ ತಪ್ಪಿಸಿ ಸತ್ಯಾನ್ವೇಷಕನ ಅಂತರಂಗವನ್ನು ನಿರ್ದೇಶಿಸುತ್ತದೆ. ಅಂತರಂಗದ ಶುದ್ಧಿಯಿಂದ ಆರಂಭಿಸಿ ಅಂತಃಕರಣವನ್ನು ಜಾಗ್ರತಗೊಳಿಸಿದಾಗ ಅದು ಸತ್ಯವನ್ನು ಗ್ರಹಿಸುತ್ತದೆ. ಕೊನೆಗೆ ಅದೇ ಸತ್ಯವಾಗುತ್ತದೆ. ಆಗ ವಸ್ತು ಮತ್ತು ಜ್ಞಾತೃಗಳ (ಅದನ್ನು ತಿಳಿದ ಜ್ಞಾನಿಗಳ) ನಡುವಿನ ವ್ಯತ್ಯಾಸವು ಇಲ್ಲವಾಗುತ್ತದೆ.

ಡಾ||ಎಸ್.ಎಲ್.ಭೈರಪ್ಪನವರ 'ಯಾನ' ಕಾದಂಬರಿಯು, ಓದುವ ಮೊದಲು - ಅನಂತರ ಅಧ್ಯಯನದ ಅವಧಿಯಲ್ಲಿ ಮತ್ತು ಓದಿ ಮುಗಿಸಿ ಮೆಲುಕು ಹಾಕುವಾಗ ಮತ್ತು ಅನಂತರವೂ ಕಾಡುವ ಅನುಭಾವವಾಗುತ್ತದೆ. ಇತ್ತೀಚಿನ ಹತ್ತಾರು ಸಹಸ್ರ ವರ್ಷಗಳ ಮಾನವವಿಕಾಸದ ಹಾದಿಯಲ್ಲಿ ಸೂರ್ಯೋಪಾಸನೆ - ಪ್ರಕೃತಿ ಉಪಾಸನೆಗಳು ಸನಾತನ ಧರ್ಮದಂತಹ ಸಹಜಧರ್ಮಗಳ ನೆಲೆಯಲ್ಲಿ ಗೌರವ ಪಡೆದವು, ಅಧ್ಯಾತ್ಮದ ಪಥನಿರ್ಮಿತಿಗೆ ಕಾರಣವಾದವು. ಇಸ್ಲಾಂ - ಕ್ರೈಸ್ತ ಮತಗಳ ವಿನಾಶಕಾರಿ, ಪರಮತ-ದ್ವೇಷಿ ಏಕದೇವತಾವಾದದ ಅಬ್ಬರದಲ್ಲಿ ಈ ಸೂರ್ಯೋಪಾಸನೆ - ಪ್ರಕೃತಿ ಉಪಾಸನೆಗಳು 'ಅನಾಗರಿಕ'ವೆಂಬ ಹಣೆಪಟ್ಟಿ ಧರಿಸಬೇಕಾಯಿತು. ಇಂದಿಗೂ ಮೆಕಾಲೆ-ಪ್ರಣೀತ ಬ್ರಿಟಿಷ್ ವಿಷವನ್ನೇ ಕಕ್ಕುವ ಕಾನ್ವೆಂಟುಗಳಲ್ಲಿ ಕ್ರೈಸ್ತಮತಕ್ಕೆ ಸಂಬಂಧಿಸಿದುದು Cultural ಆಗುತ್ತದೆ. ದೇಶವಾಸಿಗಳ - ಮೂಲನಿವಾಸಿಗಳ ವೇಷಭೂಷಣಗಳು - ನೃತ್ಯಗಳು (ನಕಾರಾತ್ಮಕ ಭಾವದಲ್ಲಿ) Ethnic dress, Ethnic danceಗಳೆಂಬ ಅಭಿಧಾನ ಪಡೆದು ರಂಗಪ್ರವೇಶ ಮಾಡುತ್ತವೆ. ಹಾಗಾಗಿ, ವಸಾಹತುಗಳ 'ಮಹಾಜನತೆ'ಯ ಮನಸ್ಸಿನಲ್ಲಿಯೂ ಮಂಕು ಇನ್ನೂ ಕವಿದೇ ಇದೆ.

ಭೌತಿಕ ಸೂರ್ಯ ಒಂದು ಬಿಂಬ. ಒಂದು ಪ್ರತೀಕ. ಅದರ ಮೂಲಕ ನಮ್ಮೊಳಗಿನ ಸತ್ಯವನ್ನು ನಾವು ಪ್ರವೇಶಿಸುವ ವಿಧಾನವನ್ನೇ ಸೂರ್ಯೋಪಾಸನೆ ಅಂತ ಕರೀತೀವಿ
ನಮ್ಮ ಸಂಸ್ಕೃತಿಯ, ಹಬ್ಬ ಹರಿದಿನಗಳ, ಅಧ್ಯಾತ್ಮದ ಕಲ್ಪನೆಗಳು ಬಹುಮಟ್ಟಿಗೆ ಸೂರ್ಯ-ಚಂದ್ರರನ್ನಾಧರಿಸಿ ಬೆಳೆದಿವೆ. ಆಣೆ ಪ್ರಮಾಣಗಳನ್ನೆಲ್ಲ ಸೂರ್ಯ ಚಂದ್ರರ ಹೆಸರಿನಲ್ಲಿ ಮಾಡುತ್ತಾರೆ. ಸತ್ಯದ ಅಧಿದೇವತೆಯೇ ಸೂರ್ಯ. ಸೂರ್ಯ ಅಂದರೆ ಪೂರ್ವದಲ್ಲಿ ಹುಟ್ಟಿ, ನೆತ್ತಿಯ ಮೇಲೇರಿ ಪಶ್ಚಿಮದಲ್ಲಿ ಮುಳುಗುವ ಉರಿ ಉಂಡೆಯಲ್ಲ. ಪೂರ್ವ ಪಶ್ಚಿಮ ನೆತ್ತಿ ಅಂಗಾಲುಗಳೆನ್ನುವುದೆಲ್ಲ, ಈ ಭೂಮಿಯ ಮಧ್ಯರೇಖಾ ಪ್ರದೇಶದಲ್ಲಿ ವಾಸಿಸುವ ನಾವು ಮಾಡಿಕೊಂಡಿರುವ ಗುರುತುಗಳು. ಹಾಗಾದರೆ, ಸೂರ್ಯ ಎಂದರೆ ಏನು? ಈ ಭೌತಿಕ ಸೂರ್ಯ ಒಂದು ಬಿಂಬ. ಒಂದು ಪ್ರತೀಕ. ಅದರ ಮೂಲಕ ನಮ್ಮೊಳಗಿನ ಸತ್ಯವನ್ನು ನಾವು ಪ್ರವೇಶಿಸುವ ವಿಧಾನವನ್ನೇ ಸೂರ್ಯೋಪಾಸನೆ ಅಂತ ಕರೀತೀವಿ (ಪುಟಗಳು 178ರಿಂದ 180), ಎನ್ನುವ ಭೈರಪ್ಪನವರ ಸಾಲುಗಳು ಯುಗಾಂತರಗಳ ಈ ಸತ್ಯದ ಮೇಲಿನ ಮಿಥ್ಯೆಯ ಪೊರೆಯನ್ನು ಕಳಚಿ, ಪರಮಸತ್ಯದ ಬೆಳಕನ್ನು ನೀಡುತ್ತವೆ. ಹಿಂದೆ ಬಿಟ್ಟ ಕಿರುನಕ್ಷತ್ರವು ಹೇಗೆ ಬ್ರಹ್ಮಸ್ವರೂಪವಾದ ಸೂರ್ಯನೋ ಹಾಗೆ ಖಭೌತ ವಿಜ್ಞಾನಿಗಳು ಅಂದಾಜಿಸಿರುವ ಬಿಲಿಯ ಬಿಲಿಯ ಬಿಲಿಯ ನಕ್ಷತ್ರಗಳಲ್ಲಿ ಒಂದೊಂದೂ ಬ್ರಹ್ಮಸ್ವರೂಪಿಯೇ, ಸತ್ಯಸ್ವರೂಪಿಯೇ ಎನ್ನುವ ಮಾತುಗಳು ಗಾಢಚಿಂತನೆಗೆ ಪ್ರೇರಣೆ ನೀಡುತ್ತವೆ. ಸೂರ್ಯನ ಮೇಲೆಯೇ ಗೌರವದ ಬೆಳಕು ಚೆಲ್ಲಿದಂತಾಗಿದೆ.
`ಯಾನ'ದ ಓದು ಎಂದರೆ, ಪರಮಸತ್ಯದ ಒಂದು ಶೋಧ.

Labels: ,

0 Comments:

Post a Comment

Subscribe to Post Comments [Atom]

<< Home