SSS Reaching Out for the Reason...
SSS South Social StaGe |Reaching Out for the Reason...
Follow @South_Social
SSS
Visit blogadda.com to discover Indian blogs
by Akshay Prabhu
Genre : ____
Expand Expand

'Uneasy Neighbours' - Manjunath Ajjampura

'Uneasy Neighbours' - A book by Ram Madhav, general secretary of Bharatiya Janata Party

ಒಂದು ದೊಡ್ಡ ಹಡಗನ್ನು ಕಲ್ಪಿಸಿಕೊಳ್ಳಿ. ಅಲ್ಲಿ ಹಲವು ನೂರು ಜನ ನಿರಂತರ ಪರಿಶ್ರಮದಿಂದ ಕೆಲಸ ಮಾಡುತ್ತಿದ್ದಾರೆ, ರಾಶಿರಾಶಿ ಕಚ್ಚಾ ಸಾಮಗ್ರಿ ಬಿದ್ದಿದೆ; ಬಗೆಬಗೆಯ ವಸ್ತುಗಳು, ಆಟಿಗೆಗಳು ಒಂದೇ ಸಮನೆ ತಯಾರಾಗುತ್ತಿವೆ, ಅಲ್ಲಿಯೇ ಪ್ಯಾಕಿಂಗ್ ಸಹಾ ಆಗುತ್ತಿದೆ, ಹಡಗು ಚಲಿಸುತ್ತಲೇ ಇದೆ, ಸುತ್ತ ಪ್ರಶಾಂತ ಮಹಾಸಾಗರದಲ್ಲಿ ಅಲೆಗಳು ಭೋರ್ಗರೆಯುತ್ತಿವೆ... ಇದನ್ನು ನೀವು ಹೇಗೆಹೇಗೆಲ್ಲಾ ಕಲ್ಪಿಸಿಕೊಳ್ಳುತ್ತೀರಿ? ಹಾಲಿವುಡ್ ನಿರ್ಮಿತ ಯಾವುದೋ ಒಂದು ಹಳೆಯ ಭವ್ಯ ಚಲನಚಿತ್ರ ಕಣ್ಮುಂದೆ ಬಂದಿತೇ? ವಿಚಿತ್ರವೆಂದರೆ, ನಿಜ ಜೀವನದ ವಾಸ್ತವವು ಅಂತಹ ಚಲನಚಿತ್ರಗಳ ಕಲ್ಪನಾಲೋಕವನ್ನು, ಅಸಂಭಾವ್ಯ ತರ್ಕವನ್ನು ಮೀರಿಸುತ್ತದೆ - ನಾಚಿಸುವಂತಿರುತ್ತದೆ.

Manjunath Ajjampura

'ಅಮೆರಿಕಾ' ಎಂದು ನಾವು ಬಹುಮಟ್ಟಿಗೆ ಸಂಬೋಧಿಸುವ 'ಯುಎಸ್ಎ', ವಿಶ್ವದ ಹಿರಿಯಣ್ಣ ತಾನೇ ಎಂದು ಭಾವಿಸಿಕೊಂಡುಬಿಟ್ಟಿದೆ. ಐರೋಪ್ಯ ಶ್ವೇತವರ್ಣೀಯರ ದುರಹಂಕಾರ, ಭೋಗವಸ್ತುಪ್ರೀತಿ, ಸ್ವಾರ್ಥ, ಪರಪೀಡನ ಪ್ರವೃತ್ತಿಗಳ ಮೂರ್ತೀಕೃತ ದೇಶವೇ ಈ ಅಮೆರಿಕಾ. ಅನೇಕ ದಶಕಗಳ ಕಾಲ ಕಮ್ಯೂನಿಸ್ಟ್ ಚೀನಾ ದೇಶವು ವಿಶ್ವಸಂಸ್ಥೆಗೆ ಹೆಜ್ಜೆಯಿಡದಂತೆ ರಾಜಕೀಯ ಮಾಡಿದ ಈ ಅಮೆರಿಕಾ, ಈಗ ಅದೇ ಚೀನಾ ದೇಶದ ಗುರಿ ಆಗಿಹೋಗಿದೆ. ಅಮೆರಿಕದ ಮಾಲ್ ಗಳು, ಮನೆಗಳು, ಕಛೇರಿಗಳು ಚೀನಾ ನಿರ್ಮಿತ ವಸ್ತುಸಾಮಗ್ರಿಯಿಂದ ತುಂಬಿಹೋಗಿವೆ. ಈಗ ಅದು ಚೀನಾದೇಶದ ಬಹುದೊಡ್ಡ ಗ್ರಾಹಕ. ಅಂತಹ ವಸ್ತು ಸಾಮಗ್ರಿಗಳ ಸರಬರಾಜನ್ನು ಹಠಾತ್ತಾಗಿ ನಿಲ್ಲಿಸಿದರೆ, ಅಮೆರಿಕಾ ತತ್ತರಿಸಿ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಚೀನಾ ದೇಶದ ಕುಯುಕ್ತಿ - ಕುಟಿಲೋದ್ದೇಶವೂ ಅದೇ ಆಗಿದೆ. ಮೇಲೆ ಚಿತ್ರಿಸಿದಂತೆ ಹಡಗುಗಳು ನಿತ್ಯ ಚೀನಾದಿಂದ ಅಮೆರಿಕೆಗೆ ಧಾವಿಸುತ್ತವೆ. ಹಡಗಿನಲ್ಲಿ ಕೆಲಸ ಮಾಡುವ ಶ್ರಮಿಕರ ಕೈಕಾಲುಗಳಿಗೆ ಬೇಡಿ ಒಂದು ಇರುವುದಿಲ್ಲ ಅಷ್ಟೇ!ಸ್ವಯಂಘೋಷಿತ ಹಿರಿಯಣ್ಣ ಅಮೆರಿಕೆಯನ್ನೇ ಆಪೋಶನ ತೆಗೆದುಕೊಂಡಿರುವ ಚೀನಾ ದೇಶವು ಹತ್ತಾರು ವರ್ಷಗಳಿಂದ ನೇಪಾಳ - ಬಾಂಗ್ಲಾದೇಶ - ಮಯನ್ಮಾರ್ - ಶ್ರೀಲಂಕಾ - ಮಾಲ್ಡೀವ್ಸ್‌ಗಳಂತಹ ಭಾರತದ ನೆರೆ(ಯ) ಹೊರೆ ದೇಶಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಪಾಕಿಸ್ತಾನವಂತೂ ಬಿಡಿ, ಚೀನಾದ ಊಳಿಗದಲ್ಲಿ ಬಿದ್ದಿರುವ ನಾಯಿಯಾಗಿಹೋಗಿದೆ.

ಪಾಕಿಸ್ತಾನಕ್ಕಂತೂ ಈ ಚೀನಾ ದೇಶವು ಬೇಹುಗಾರಿಕೆ ಮಾಹಿತಿ ಸಂಗ್ರಹ, ಮೇಲ್ವಿಚಾರಣೆ, ನಿಯಂತ್ರಣ, ಸಂಪರ್ಕ ವ್ಯವಸ್ಥೆ ಇತ್ಯಾದಿ ಕ್ಷೇತ್ರಗಳನ್ನು ಒಳಗೊಂಡಂತೆ ಸಮಗ್ರ ಸ್ವರೂಪದ ನೆರವು ನೀಡುತ್ತಿದೆ
ಕಾಂಗ್ರೆಸ್ ನಾಯಕತ್ವದ ಈವರೆಗಿನ ನರಸತ್ತ ಕೇಂದ್ರ ಸರ್ಕಾರವಂತೂ ಅಂತಾರಾಷ್ಟ್ರೀಯ ಪರಿಸ್ಥಿತಿಗಳನ್ನು - ಸಮಸ್ಯೆಗಳನ್ನು ಎದುರಿಸುವಲ್ಲಿ ಪೂರ್ಣವಾಗಿ ವಿಫಲವಾಗಿತ್ತು. ಐದು ದಶಕಗಳ ಹಿಂದೆ ಸೇನಾ ಆಕ್ರಮಣದಿಂದ ಭಾರತದ ದೊಡ್ಡ ಗಾತ್ರದ ಭೂಮಿಯನ್ನು ವಶಪಡಿಸಿಕೊಂಡ ಚೀನಾ ದೇಶವು, ಭಾರತವು ನೆಮ್ಮದಿಯಿಂದ ಇರಲಾಗದಂತಹ ಸ್ಥಿತಿಯನ್ನು ಉದ್ದೇಶಪೂರ್ವಕವಾಗಿ ತಂದೊಡ್ಡಿದೆ. ಈ ಪರಿಪ್ರೇಕ್ಷ್ಯದಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ವಕ್ತಾರರಾದ ರಾಮ ಮಾಧವ್ ಬರೆದಿರುವ ಅನೀಸೀ ನೈಬರ್ಸ್("Uneasy Neighbours") ಇನ್ನೂ ಹೆಚ್ಚಿನ ಮಹತ್ತ್ವ ಪಡೆಯುತ್ತದೆ. ಚೀನಾ ದೇಶವು ಟಿಬೆಟ್ ದೇಶವನ್ನೇ ನುಂಗಿಹಾಕಿದ್ದು, ನೆಹರೂ ಅವರ ಆತ್ಮಹತ್ಯಾತ್ಮಕ ಕಾರ್ಯನೀತಿಗಳು, 'ಪಂಚಶೀಲ'ದ ಅವಿವೇಕ, ಮಾವೋ-ತ್ಸೆ-ತುಂಗನ ಕುಟಿಲ ನಡೆಗಳು, ವಿಶ್ವಸಂಸ್ಥೆಗೆ ಈ ಸಮಸ್ಯೆಯನ್ನು ಕೊಂಡೊಯ್ದ ತಪ್ಪು ನಿರ್ಧಾರ, ಇತ್ಯಾದಿ ಅಧ್ಯಾಯಗಳನ್ನು ಇಲ್ಲಿ ಅವರು ವಿವರಿಸಿದ್ದಾರೆ. ನಮ್ಮ ಆತಂಕಕಾರಿ ಸ್ಥಿತಿಗತಿಯ ಅಧ್ಯಯನಕ್ಕೆ ಇದು ಸೂಕ್ತ ಗ್ರಂಥ. ಭಾರತದ ಸುತ್ತಮುತ್ತಲ ಎಲ್ಲಾ ದೇಶಗಳಿಗೆ ಚೀನಾ ಶಸ್ತ್ರಾಸ್ತ್ರ ಸರಬರಾಜು ಮಾಡುತ್ತಿದೆ. ನಕ್ಸಲರಂತೂ ಭಾರತದ ಪೊಲೀಸ್ ಪಡೆಗಳಿಗೆ - ಅರೆಸೇನಾ ಪಡೆಗಳಿಗೆ ಅತಿ ದೊಡ್ಡ ತಲೆನೋವಾಗಿದ್ದಾರೆ. ಪಾಕಿಸ್ತಾನಕ್ಕಂತೂ ಈ ಚೀನಾ ದೇಶವು ಬೇಹುಗಾರಿಕೆ ಮಾಹಿತಿ ಸಂಗ್ರಹ, ಮೇಲ್ವಿಚಾರಣೆ, ನಿಯಂತ್ರಣ, ಸಂಪರ್ಕ ವ್ಯವಸ್ಥೆ ಇತ್ಯಾದಿ ಕ್ಷೇತ್ರಗಳನ್ನು ಒಳಗೊಂಡಂತೆ ಸಮಗ್ರ ಸ್ವರೂಪದ ನೆರವು ನೀಡುತ್ತಿದೆ. ಪಾಕಿಸ್ತಾನದ ಸೇನೆಯ ಬಹುಪಾಲು ಯಂತ್ರಾಂಶ, ಮದ್ದು ಗುಂಡು, ಬಿಡಿಭಾಗಗಳು (70 ಶತಾಂಶ) ಚೀನಾದಿಂದಲೇ ಬರುತ್ತಿವೆ. ಮೇ 1998ರ ಪಾಕಿಸ್ತಾನದ ಅಣ್ವಸ್ತ್ರ ಪ್ರಯೋಗವು ಯಶಸ್ವಿಯಾದುದಕ್ಕೆ, ಅಂದಿನ ಪ್ರಧಾನಿ ನವಾಜ್ ಷರೀಫ್ ಚೀನಾದೇಶಕ್ಕೆ ವಂದನೆ ಸಲ್ಲಿಸಿದರು. ಏಕೆಂದರೆ ಆ ಅಣ್ವಸ್ತ್ರ ಪ್ರಯೋಗಕ್ಕೆ ಸಂಬಂಧಿಸಿದ ಪ್ರತಿಯೊಂದೂ ಚೀನಾದೇಶದಲ್ಲಿಯೇ ತಯಾರಾಗಿತ್ತು. ಸೇನೆ ಮತ್ತು ಇಸ್ಲಾಮೀ ಭಯೋತ್ಪಾದಕರ ಆಡುಂಬೊಲವಾಗಿರುವ, ಭಾರತದ್ವೇಷದ ಒಂದೇ ತಂತುವಿನಿಂದ ಜನರನ್ನು ಉದ್ರೇಕಿಸಿ ತಮ್ಮ ಸ್ವಾರ್ಥ ಸಾಧಿಸಿಕೊಳ್ಳುವ ರಾಜಕಾರಣಿಗಳ ನಾಯಕತ್ವವಿರುವ ಮೂರ್ಖದೇಶ ಪಾಕಿಸ್ತಾನದ ಸಖ್ಯದಿಂದ ಈ ಚೀನಾ ದೇಶಕ್ಕೆ ಆಗುವುದಾದರೂ ಏನು, ಎಂಬ ಪ್ರಶ್ನೆ ಮೂಡುವುದು ಸಹಜ. ಹೆಚ್ಚೆಂದರೆ ಸಿಂಧುಸಾಗರಕ್ಕೆ (ಅರಬ್ಬೀ ಸಮುದ್ರ) ಪಾಕಿಸ್ತಾನದ ಮೂಲಕ ಚೀನಾಗೆ ಹತ್ತಿರದ ಸಮುದ್ರ ಮಾರ್ಗ ದೊರೆಯುತ್ತದೆ. ಅಷ್ಟೇ! ಅದೇನೂ ಅಂತಹ ದೊಡ್ಡಸಂಗತಿ ಎನ್ನಿಸುವುದಿಲ್ಲ. ಭಾರತಕ್ಕೆ ನಿರಂತರವಾಗಿ ಕಿರಿಕಿರಿ ಮಾಡುವುದು ಚಿತ್ರಹಿಂಸೆ ನೀಡುವುದೇ ಅದರ ಉದ್ದೇಶವಾಗಿದೆ. ಪ್ರಸಕ್ತ ಯುಗದಲ್ಲಿ ನೇರಾನೇರ ಯುದ್ಧಕ್ಕಿಂತ ಆರ್ಥಿಕ ಯುದ್ಧ, ದಿಗ್ಬಂಧನ, ಕಿರಿಕಿರಿಗಳೇ ಯುದ್ಧ ತಂತ್ರಗಳಾಗಿವೆ, ವ್ಯೂಹಯುಕ್ತಿಗಳಾಗಿ ಬಿಟ್ಟಿವೆ. ನೆರೆಯ ದೇಶಗಳೊಂದಿಗೆ ಸೌಹಾರ್ದ ಸಂಬಂಧದ ಜೊತೆಗೆ, ಆತ್ಮವಿಶ್ವಾಸದ - ಶಕ್ತಿಯುತವಾದ - ಯುಕ್ತವಾದ ಅಭಿವ್ಯಕ್ತಿಯ ಆರಂಭದ ದಿನಗಳು ಇದೀಗ ಬಂದಿವೆ.
    - Manjunath Ajjampura

Labels: ,

by Akshay Prabhu
Genre : ____
Expand Expand

'ಪ್ರಾಚೀನ ಭಾರತವೆಂಬ ಅದ್ಭುತ' - Manjunath Ajjampura

ಮೂರ್ನಾಲ್ಕು ದಶಕಗಳ ಹಿಂದೆ ಕನ್ನಡದಲ್ಲಾಗಲೀ-ಇಂಗ್ಲಿಷಿನಲ್ಲಾಗಲಿ ಅಪರೂಪವೆಂಬಂತೆ ಒಂದು ಒಳ್ಳೆಯ ಪುಸ್ತಕ ಬಂದರೆ ತುಂಬ ಸಂಭ್ರಮವೆನಿಸುತ್ತಿತ್ತು. ಆ ಕುರಿತಾದ ವಿಮರ್ಶೆ, ಟೀಕೆ, ಅವಲೋಕನಗಳಿಗಾಗಿ ಬೇರೆಬೇರೆ ಪತ್ರಿಕೆ, ನಿಯತಕಾಲಿಕೆಗಳನ್ನು ತಡಕಾಡುತ್ತಿದ್ದುದೂ ಇತ್ತು. ಈಗ ತುಂಬ ತುಂಬ ಬದಲಾವಣೆಯೇ ಆಗಿದೆ. ಕಳೆದ ಏಳೆಂಟು ವರ್ಷಗಳಲ್ಲಿ ಓದಬೇಕಾದ ಮತ್ತು ತುಂಬ ಮಹತ್ತ್ವದ ಹತ್ತಾರು ಗ್ರಂಥಗಳು ಪ್ರತಿವರ್ಷ ಪ್ರಕಟವಾಗಿವೆ, ಆಗುತ್ತಿವೆ. ಕವನ, ಕಥೆ, ಕಾದಂಬರಿಗಳಿಗಿಂತ ವೈಚಾರಿಕ ಸಾಹಿತ್ಯವು ಮಹತ್ತ್ವ ಪಡೆದಿರುವುದು ಬಹಳ ದೊಡ್ಡ ಸಾಮಾಜಿಕ ಬದಲಾವಣೆ. ಮೂವತ್ತರ ದಶಕದಲ್ಲಿ ಶಿವರಾಮ ಕಾರಂತರ 'ಬಾಲ ಪ್ರಪಂಚ' ಕಿರಿಯರ ವಿಶ್ವಕೋಶದ ಸಂಪುಟಗಳು ಪ್ರಕಟವಾದಾಗ, ಒಂದು ಸಾವಿರ ಪ್ರತಿಗಳು ಮಾರಾಟವಾಗಲು ಹತ್ತುವರ್ಷಗಳಾದುವಂತೆ. ಹಾಗೆಂದು ಕಾರಂತರೇ ದಾಖಲಿಸಿದ್ದಾರೆ. ಈಗ ನೋಡಿ, ಪತ್ರಕರ್ತ ಅರುಣ್ ಶೌರಿ ಅವರ 'ಮಹಾನ್ ಇತಿಹಾಸಕಾರರು' ಕೃತಿಯ ಮೂರು ಸಾವಿರ ಪ್ರತಿಗಳು ಮೂರೇ ತಿಂಗಳಲ್ಲಿ ಮಾರಾಟವಾಗಿವೆ ಎನ್ನುವುದು ಕಡಿಮೆಯ ಸಾಧನೆಯಲ್ಲ. ಜನರು ವೈಚಾರಿಕ-ವೈಜ್ಞಾನಿಕ-ಸಂಕೀರ್ಣ ಕೃತಿಗಳನ್ನು ಕೊಂಡು ಓದುವ - ವ್ಯಾಖ್ಯಾನಿಸುವ ಪರ್ವಕಾಲವಿದು.

Manjunath Ajjampura

ಭಾರತ ಅಧ್ಯಯನಶಾಸ್ತ್ರದ ದೊಡ್ಡಪಂಡಿತರಾದ ಆರ್ಥರ್ ಲೆವೆಲಿನ್ ಬಾಶಂ ಅವರ ಕೃತಿ 'ಪ್ರಾಚೀನ ಭಾರತವೆಂಬ ಅದ್ಭುತ' ಮೂಲಕೃತಿಯು ಇಂಗ್ಲಿಷಿನಲ್ಲಿ ಇಂಗ್ಲೆಂಡಿನಲ್ಲಿ ಆರು ದಶಕಗಳ ಹಿಂದೆ ಪ್ರಕಟವಾಯಿತು. ಐಬಿಎಚ್ ಪ್ರಕಾಶನದವರು ಎರಡು ವರ್ಷಗಳ ಹಿಂದೆ ಕನ್ನಡದಲ್ಲಿ ಈ ಬೃಹದ್ಗ್ರಂಥವನ್ನು ಹೊರತಂದರು. ವಿದ್ವಾಂಸರಾದ ಧ್ರುವರಾಜ ಮಿಜರ್ಿ ಅವರು ಅಪಾರ ಪರಿಶ್ರಮದಿಂದ ಕನ್ನಡಕ್ಕೆ ಅನುವಾದಿಸಿ 800 ಪುಟಗಳ ಈ ಗ್ರಂಥವನ್ನು ಸಿದ್ಧಪಡಿಸಿದ್ದಾರೆ. ನಮ್ಮ ಪ್ರಾಚೀನ ಸಂಸ್ಕೃತಿ, ಹರಪ್ಪಾ - ಋಗ್ವೇದಗಳ ಸಂಸ್ಕೃತಿಗಳ ಬಗೆಗೆ, ಅಂತೆಯೇ ಪ್ರಾಚೀನ ಹಾಗೂ ಮಧ್ಯಯುಗದ ಸಾಮ್ರಾಜ್ಯಗಳ ಬಹುಮೂಲ್ಯ ವಿವರಗಳಿಲ್ಲಿವೆ. ಈ ಗ್ರಂಥದಲ್ಲಿ ಮತಧರ್ಮಗಳ ಬಗೆಗೆ, ಸಾಮಾಜಿಕ ರೀತಿನೀತಿಗಳ ಬಗೆಗೆ, ಲಲಿತಕಲೆ-ಶಿಲ್ಪಕಲೆಗಳ ಬಗೆಗೆ, ಅನೇಕ ಭಾರತೀಯ ಭಾಷೆಗಳ ಬಗೆಗೆ ತುಂಬ ತುಂಬ ವಿವರಗಳಿವೆ. ಕ್ರಿಸ್ತಪೂರ್ವ-ಇಸ್ಲಾಂಪೂರ್ವದ ಭಾರತದ ಸಾಮಾಜಿಕ ವ್ಯವಸ್ಥೆ - ಆಡಳಿತ ವ್ಯವಸ್ಥೆಗಳ ವಿವರಗಳು ತುಂಬ ಸ್ವಾರಸ್ಯವಾಗಿವೆ. ಆಡಳಿತದ-ವ್ಯವಸ್ಥೆಯ ಎಲ್ಲವೂ ಮೊಘಲರ-ಬ್ರಿಟಿಷರ 'ಕೊಡುಗೆ' ಎನ್ನುವ ನಮ್ಮ 'ಬುದ್ಧಿಜೀವಿ'ಗಳು, ವಾಮಪಂಥೀಯರು, ಇಂಗ್ಲಿಷರ 'ಔರಸಪುತ್ರ'ರು ಇಂತಹ ಕೃತಿಗಳನ್ನು ಓದುವುದು ಒಳ್ಳೆಯದು.

ದಾಖಲೆಗಳನ್ನು ಬಹಳ ಎಚ್ಚರಿಕೆಯಿಂದ ಇಡಲಾಗುತ್ತಿತ್ತು. ಯಾವುದನ್ನೂ ಅನಿರೀಕ್ಷಿತ ಘಟನೆಗಳಿಗೆ ಬಿಡುತ್ತಿರಲಿಲ್ಲ.
ರಾಜನ ಶಾಸನಗಳನ್ನು ಸಂಬಂಧಪಟ್ಟ ಜನರಿಗೆ ತಲುಪಿಸುವುದಕ್ಕಾಗಿ ಕಾರ್ಯದರ್ಶಿ ಮತ್ತು ಗುಮಾಸ್ತರುಗಳ ಒಂದು ಪಡೆಯೇ ಇತ್ತು. ತಪ್ಪಾಗದಂತೆ ನೋಡಿಕೊಳ್ಳುವುದಕ್ಕಾಗಿ ಗಮನಾರ್ಹ ಮುನ್ನೆಚ್ಚರಿಕೆಗಳನ್ನು ತೆಗದುಕೊಳ್ಳಲಾಗುತ್ತಿತ್ತು. ಉದಾಹರಣೆಗೆ ಚೋಳರ ಕಾಲದಲ್ಲಿ ರಾಜನ ಆದೇಶಗಳನ್ನು ಮೊದಲು ಕಾರಕೂನರು ರಾಜನು ಹೇಳುತ್ತಿದ್ದಂತೆ ಬರೆದುಕೊಳ್ಳುತ್ತಿದ್ದರು. ಕರಡು ಸರಿಯಾಗಿದೆಯೇ ಎಂಬುದನ್ನು ಪರಿಣತ ಸಾಕ್ಷಿಗಳು ಪರಿಶೀಲಿಸುತ್ತಿದ್ದರು. ಆದೇಶಗಳನ್ನು ಪಡೆಯಬೇಕಾದವರಿಗೆ ಅದು ತಲಪುವ ಮೊದಲು ತುಂಬ ಎಚ್ಚರಿಕೆಯಿಂದ ಇನ್ನೊಮ್ಮೆ ಅವುಗಳನ್ನು ಬರೆಯಲಾಗುತ್ತಿತ್ತು. ಭೂಮಿಯನ್ನು ಅನುದಾನವಾಗಿ ಕೊಡಬೇಕಾದ ಸಂದರ್ಭದಲ್ಲಿ, ಸವಲತ್ತುಗಳನ್ನು ಕೊಡಬೇಕಾದ ಸಂದರ್ಭಗಳಲ್ಲಿ, ರಾಜನ ಆದೇಶಗಳನ್ನು ಸರಿಯಾಗಿ ಪಾಲಿಸಲಾಗುತ್ತಿದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಾಮಾನ್ಯವಾಗಿ ರಾಜನ ಆಸ್ಥಾನದಿಂದ ಒಬ್ಬ ಮುಖ್ಯ ಅಧಿಕಾರಿಯನ್ನು ಕಳುಹಿಸಿಕೊಡಲಾಗುತ್ತಿತ್ತು. ದಾಖಲೆಗಳನ್ನು ಬಹಳ ಎಚ್ಚರಿಕೆಯಿಂದ ಇಡಲಾಗುತ್ತಿತ್ತು. ಯಾವುದನ್ನೂ ಅನಿರೀಕ್ಷಿತ ಘಟನೆಗಳಿಗೆ ಬಿಡುತ್ತಿರಲಿಲ್ಲ. ಮಂತ್ರಿಗಳನ್ನು-ಉನ್ನತ ಅಧಿಕಾರಿಗಳನ್ನು, ಒಟ್ಟಾಗಿ ಮೊದಲಿನ ಗ್ರಂಥಗಳಲ್ಲಿ, ಮಹಾಮಾತ್ಯರೆಂದು ಕರೆಯಲಾಗಿದೆ. ಖಾತೆಗಳನ್ನು ಆಗಾಗ ಬದಲಾಯಿಸಲಾಗುತ್ತಿತ್ತು. ಬ್ರಾಹ್ಮಣವರ್ಗದ ವೃದ್ಧರೂ ಸೇರಿದಂತೆ, ಎಲ್ಲರೂ ಸೈನಿಕ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರು (ಪುಟ 144).

ಮೌರ್ಯರ ಕಾಲದಲ್ಲಿ ವ್ಯಕ್ತಿಜೀವನದ ಪ್ರತಿಯೊಂದು ಮಗ್ಗುಲ ಮೇಲೂ ಸರಕಾರದ ನಿಗಾ ಇರುತ್ತಿತ್ತು, ಸಾಧ್ಯವಿದ್ದ ಮಟ್ಟಿಗೆ ನಿಯಂತ್ರಣ ಇರುತ್ತಿತ್ತು. ಎಲ್ಲಾ ಗಣಿಗಳು (ಆಗ ಈ ವರ್ಗೀಕರಣಕ್ಕೆ ಮುತ್ತು, ಉಪ್ಪು, ಮೀನುಗಾರಿಕೆಗಳೂ ಸೇರುತ್ತಿದ್ದವು) ಸರಕಾರದ ಒಡೆತನದಲ್ಲಿರುತ್ತಿದ್ದವು. ನೇರವಾಗಿ ಕೈದಿಗಳ-ದಾಸರ ನೆರವಿನಿಂದ ಇಲ್ಲವೇ ಸ್ವತಂತ್ರ ಉದ್ದಿಮೆ ದಾರರಿಗೆ ಗುತ್ತಿಗೆ ನೀಡುವುದರ ಮೂಲಕ, ಸರಕಾರವೇ ಗಣಿಗಳನ್ನು ನಿರ್ವಹಿಸುತ್ತಿತ್ತು. ಆನೆಗಳಿಂದ ಹಿಡಿದು ಉರುವಲು ಕಟ್ಟಿಗೆಯವರೆಗೆ ಅರಣ್ಯದ ಉತ್ಪನ್ನಗಳೆಲ್ಲವೂ ಸರಕಾರದ ಆಸ್ತಿಯಾಗಿದ್ದವು. ಮದ್ದುಗುಂಡುಗಳನ್ನು ಸರಕಾರೀ ಸ್ವಾಮ್ಯದ ಮದ್ದುಗುಂಡುಗಳ ಕಾಖರ್ಾನೆಗಳಲ್ಲಿಯೇ ತಯಾರಿಸಲಾಗುತ್ತಿತ್ತು. ಸರಕಾರೀ ಹಡಗು ನಿರ್ಮಾಣ ಕೇಂದ್ರಗಳಲ್ಲಿ ಹಡಗುಗಳು ನಿರ್ಮಿತವಾಗುತ್ತಿದ್ದವು.... (ಪುಟ 145-146). ನಮ್ಮ ಶ್ರೀಕೃಷ್ಣದೇವರಾಯನ ಬಗೆಗೆ, ರಾಜಕುಮಾರರಿಗೆ ನೀಡುತ್ತಿದ್ದ ತರಬೇತಿಗಳ ಬಗೆಗೆ, ರಾಶಿರಾಶಿ ಮಾಹಿತಿಯಿಲ್ಲಿದೆ. 'ಪ್ರಾಚೀನ ಭಾರತವೆಂಬ ಅದ್ಭುತ' ಗ್ರಂಥವು ನಿಜಕ್ಕೂ ಒಂದು ಅದ್ಭುತವೇ!
- ಮಂಜುನಾಥ ಅಜ್ಜಂಪುರ, ಬೆಂಗಳೂರು.

Labels: ,